ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಮಿಂಚಿ ಮರೆಯಾದ ಯಕ್ಷರಂಗದ ಮಿನುಗುತಾರೆ : ಶಶಿಧರ ಪಡುಕೋಣೆ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಗುರುವಾರ, ಮಾರ್ಚ್ 10 , 2016

ತೆಂಕು ಬಡಗುತಿಟ್ಟಿನ ಸವ್ಯಸಾಚಿ ಸ್ತ್ರೀವೇಷಧಾರಿಯಾಗಿ, ಸದ್ಯ ತೆಂಕುತಿಟ್ಟಿನ ಪ್ರತಿಷ್ಟಿತ ಶ್ರೀ ಧರ್ಮಸ್ಥಳ ಮೇಳದ ಯುವ ಸ್ತ್ರೀವೇಷಧಾರಿಯಾದ ಸರಳ ಸಜ್ಜನ ಕಲಾವಿದ ಶಶಿಧರ ಪಡುಕೋಣೆಯವರು 36ರ ಹರೆಯದ ಅತೀ ಚಿಕ್ಕ ವಯಸ್ಸಿನಲ್ಲಿ ವಿಧಿಯ ಕ್ರೂರತೆಗೆ ಬಲಿಯಾದದ್ದು ಯಕ್ಷಗಾನದ ಉಭಯತಿಟ್ಟಿಗೂ ತುಂಬಲಾರದ ನಷ್ಟ.

ಯಕ್ಷಗಾನ ವಲಯದಲ್ಲಿ ವಿನಯಶೀಲ, ಸಜ್ಜನನೆಂದು ಗುರುತಿಸಿಕೊಂಡು ಯಾವುದೇ ದುಶ್ಚಟದಿಂದ ದೂರವಿದ್ದು ಸದಾ ತನ್ನ ವೇಷದಬಗ್ಗೆ ಚಿಂತನಶೀಲರಾಗಿರುತಿದ್ದ ಶಶಿಧರ ಯಕ್ಷಗಾನ ರಂಗ ಕಂಡ ಅಪರೂಪದಲ್ಲಿ ಅಪರೂಪದ ಕಲಾವಿದ.

ಕುಂದಾಪುರ ತಾಲೂಕಿನ ಮರವಂತೆಯ ವರಾಹ ದೇವಸ್ಥಾನದಿಂದ ದೋಣಿಯಲ್ಲಿಯೇ ಹೋಗಬೇಕಾದ ಊರು ಪಡುಕೋಣೆ ಎಂಬುದು ವಿವಿದ ಕ್ಷೇತ್ರಗಳಲ್ಲಿ‌ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಊರು, ಪತ್ರಿಕೋದ್ಯಮ ಚಲನಚಿತ್ರ, ಕ್ರೀಡೆಯ ಸಹಿತ ಹಲವಾರು ಪ್ರತಿಬಾವಂತರು ಹುಟ್ಟಿದ ಊರಾದರೂ ಯಕ್ಷಗಾನದ ಮಟ್ಟಿಗೆ, ಪಡುಕೋಣೆ ಸೂರ ಗಾಣಿಗರ ನಂತರ ಬೆಳಕಿಗೆ ಬಂದ ಪ್ರತಿಭೆ ಶಶಿಧರ ಪಡುಕೋಣೆಯವರು. ಅತ್ಯಂತ ಬಡತನದಲ್ಲಿ ಹುಟ್ಟಿದ ಇವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿ ಇಬ್ಬರು ತಂಗಿಯಂದಿರ ಜವಬ್ದಾರಿ ಹೊತ್ತವರು. ತನ್ನ ತಂಗಿಯಂದಿರ ಮದುವೆಯನ್ನು ಮಾಡಿ ಇನ್ನೇನು ಹೊಸಬಾಳನ್ನು ಪ್ರವೇಶಿಸುವ ಮುನ್ನವೇ ವಿಧಿಯ ಕ್ರೂರ ಧೃಷ್ಟಿಗೆ ಬಲಿಯಾದದ್ದು ವಿಪರ್ಯಾಸ.

ಜೀವನೋಪಾಯಕ್ಕಾಗಿ ಯಕ್ಷಗಾನವನ್ನು ಆರಿಸಿಕೊಂಡ ಶಶಿ ಯಾವುದೇ ಅದಿಕ್ರತ ಗುರುವಿಲ್ಲದೆ ಕಂಡುಕೇಳಿ ಕಲಿತು ಸುಮಾರು 15 ವರ್ಷ ಸ್ತ್ರೀವೇಷಧಾರಿಯಾಗಿ ವಿವಿದ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಹಾಲಾಡಿ ಮೇಳದಲ್ಲಿ ಗೆಜ್ಜೆಕಟ್ಟಿದ ಅವರು ಸೌಕೂರು ಪೆರ್ಡೂರು ಮೇಳಗಳಲ್ಲಿ ಸೇವೆಸಲ್ಲಿಸಿ ಕಳೆದೆರಡು ವರ್ಷಗಳಿಂದ ಶ್ರೀ ಧರ್ಮಸ್ಥಳ ಮೇಳದ ಎರಡನೇ ಸ್ತ್ರೀವೇಷಧಾರಿಯಾಗಿ ಕೆದಿಲ ಜಯರಾಮ ಭಟ್ಟರ ಸಹವರ್ತಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಹಿರಿಯರಾದ ಗೋವಿಂದ ಭಟ್ಟರು ಉಮೇಶ ಶೆಟ್ಟರ ಮಾರ್ಗದರ್ಶನದಲ್ಲಿ ಪರಿಪೂರ್ಣ ಸ್ತ್ರೀವೇಷಧಾರಿಯಾಗಿ, ದೇವಿ ಮಹಾತ್ಮೆಯ ಮಾಲಿನಿ, ಅಪರೂಪಕ್ಕೆ ಶ್ರೀದೇವಿ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ನೇತ್ರಾವತಿ ಅಲ್ಲದೇ ಯಾವುದೇ ಪೌರಾಣಿಕ ಪ್ರಸಂಗದ ಸಖಿ ವೇಷಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದರು. ಕೇವಲ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಧರ್ಮಸ್ಥಳ ಮೇಳದಲ್ಲಿ ಆಡುವುದರಿಂದ ಬಡಗಿನಲ್ಲಿ ಕೇವಲ ಆಧುನಿಕ ಪ್ರಸಂಗಗಳಲ್ಲಿ ವೇಷಗಳನ್ನು ಮಾಡುತಿದ್ದ ಅವರ ಪೌರಾಣಿಕ ಪ್ರಸಂಗಗಳ ಹಿಡಿತ ವೃದ್ದಿಯಾಯಿತು. ಹಿರಿಯ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ ಮತ್ತು ರಾಮಕೃಷ್ಣ ಮಯ್ಯರು ರಂಗದಲ್ಲಿ ಇವರನ್ನು ಸಂಪೂರ್ಣವಾಗಿ ಬಳಸಿಕೊಂಡರು.

ಶ್ರೀ ಹಾಲಾಡಿ ಮೇಳದಲ್ಲಿ ಜಯಬೇರಿ ಬಾರಿಸಿದ ಮಾಯಾಮೇಘನ ಎಂಬ ಹೊಸ ಪ್ರಸಂಗದ ಮುಖ್ಯ ಸ್ತ್ರೀವೇಷವಾದ ಮೇಘನ ಪಾತ್ರದಿಂದ ಜನಪ್ರೀಯರಾದ ಪಡುಕೋಣೆಯವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಶಶಿಪ್ರಭಾ ಪರಿಣಯದ ಭ್ರಮರ ಕುಂತಳೆ, ವೀರಮಣಿ ಕಾಳಗದ ತಾರಾವಳಿ, ಮೀನಾಕ್ಷಿ, ಪದ್ಮಗಂದಿ, ಪ್ರಮೀಳೆ ಮುಂತಾದ ಕಸೆ ಸ್ತ್ರೀವೇಷಗಳು ಬಡಗಿನಲ್ಲಿ ಅವರಿಗೆ ಖ್ಯಾತಿ ತಂದಿತ್ತಿವೆ. ಜೋಡಾಟಗಳಲ್ಲಿ ಅತಿ ಚುರುಕಿನ ನೆಡೆಯಿಂದ ಕಸೆ ವೇಷಗಳೆ ಅವರಿಗೆ ದೊರಕುತಿದ್ದವು. ತಾನು ನಿರ್ವಸಿಸುತಿದ್ದ ಯಾವುದೇ ಪಾತ್ರಗಳ ವೇಷಭೂಷಣಗಳ ಬಗ್ಗೆ ಅತೀವ ಕಾಳಜಿ ಇದ್ದ ಇವರು ಇತರರಿಗೂ ಯಾವ ಪಾತ್ರಕ್ಕೆ ಯಾವ ವೇಷಭೂಷಣ ಚಂದ ಕಾಣುತ್ತದೆ ಎಂದು ಸಲಹೆ ನೀಡುತಿದ್ದರು.

ಶಶಿಧರ ಪಡುಕೋಣೆ
ಜನನ : ಎಪ್ರಿಲ್ 18, 1979
ಜನನ ಸ್ಥಳ : ಪಡುಕೋಣೆ, ಮರವಂತೆ
ಕುಂದಾಪುರ ತಾಲೂಕು
ಉಡುಪಿ ಜಿಲ್ಲೆ
ಕರ್ನಾಟಕ ರಾಜ್ಯ


ಕಲಾಸೇವೆ:
ಹಾಲಾಡಿ, ಸೌಕೂರು, ಪೆರ್ಡೂರು, ಸಾಲಿಗ್ರಾಮ ಮುಂತಾದ ಬಡಗು ಮೇಳಗಳಲ್ಲಿ ದುಡಿದು ಪ್ರಸ್ತುತ ತೆಂಕಿನ ಸುಪ್ರಸಿಧ್ಧ ಧರ್ಮಸ್ತಳ ಮೇಳದಲ್ಲಿ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮರಣ ದಿನಾ೦ಕ : ಮಾರ್ಚ್ 9, 2016
ಯಕ್ಷಗಾನದ ವೇಷಭೂಷಣ ಹೊಲಿಯುದರಲ್ಲೂ ಸಿದ್ದ ಹಸ್ತರಾದ ಇವರು ಮಳೆಗಾಲದಲ್ಲಿ ತಂಗಿಯಂದಿರ ಸಹಾಯದಿಂದ ಯಕ್ಷಗಾನದ ಡ್ರಸ್ಸ್ ಹೊಲಿಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಬಡಗಿನ ಪ್ರಸಿದ್ದ ಕಲಾವಿದರಿಗೆ ಅವರಿಗೆ ಒಪ್ಪುವ ಡ್ರಸ್ಸ್ ಹೊಲಿಸಿ ಕೊಟ್ಟು ಅನೇಕ ಕಲಾವಿದರಿಗೆ ಪ್ರೀತಿ ಪಾತ್ರರಾಗಿದ್ದರು. ಪ್ರತೀ ಸನ್ನಿವೇಷಕ್ಕೂ ಸೀರೆ ಬದಲಿಸುತಿದ್ದ ಹಿರಿಯ ಕಲಾವಿದ ದಿ. ಅರಾಟೆ ಮಂಜುನಾಥರೇ ಇದಕ್ಕೆ ನನ್ನಗೆ ಸ್ಪೂರ್ತಿ ಎಂದು ಮನದುಂಬಿ ಹೇಳುತಿದ್ದರು. ಪೆರ್ಡೂರು ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆಯವರು ಅಮೆರೀಕಾ ಪ್ರವಾಸ ಹೋದಾಗ ಅವರು ನಿರ್ವಹಿಸುತಿದ್ದ ಪಾತ್ರ ನಿರ್ವಹಿಸಿ ಜನಮನ್ನಣೆ ಪಡೆದಿದ್ದರು.

ಮಳೆಗಾಲದಲ್ಲಿ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ ಮೂಲಕ ಬಡಗುತಿಟ್ಟಿನ ಕಂಪನ್ನು ರಾಜ್ಯಾದ್ಯಂತ ಪಸರಿಸಿದ ಇವರು ಕಳೆದವರ್ಷ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯೊಂದಿಗೆ ತೆಂಕುತಿಟ್ಟಿನ ವೇಷಗಳನ್ನು ಮಾಡುತ್ತಾ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಸ್ತ್ರೀಸಹಜ ಸ್ವರ, ಲಾಲಿತ್ಯಪೂರ್ಣ ಹೆಜ್ಜೆಗಾರಿಕೆ ಸುಂದರವಾದ ಆಳಂಗದ ಮೂಲಕ ಉಭಯತಿಟ್ಟುಗಳ ಪರಿಪೂರ್ಣ ಸ್ತ್ರೀವೇಷಧಾರಿಯಾಗಿ ಅತೀ ಬೇಗ ಗುರುತಿಸಿಕೊಂಡ ಅವರು ಅಷ್ಟೇ ಬೇಗ ಕಲಾಭಿಮಾನಿಗಳನ್ನು ಅಗಲಿದ್ದಾರೆ. ಸರಳತೆ ಸಜ್ಜನಿಕೆ, ದುಶ್ಚಟರಾಹಿತ್ಯದಿಂದಾಗಿ ಸಹಕಲಾವಿದರ ಪ್ರೀತಿಯ ಶಶಿಯಾಗಿ ಕಾಣಿಸಿಕೊಂಡ ಅಮವಾಸ್ಯೆಯ ಶಶಿಯಾದದ್ದು ತೆಂಕು ಬಡಗು ಉಭಯತಿಟ್ಟಿಗೆ ತುಂಬಲಾರದ ನಷ್ಟ.

****************

ಶಶಿಧರ ಪಡುಕೋಣೆಯವರ ಕೆಲವು ದೃಶ್ಯಾವಳಿಗಳು







****************

ಶಶಿಧರ ಪಡುಕೋಣೆಯವರ ಕೆಲವು ಭಾವಚಿತ್ರಗಳು


( ಕೃಪೆ : ಕಟೀಲು ಸಿತ್ಲ ರ೦ಗನಾಥ ರಾವ್, ಕಿರಣ್ ವಿಟ್ಲ ಮತ್ತು ರಾಮ್ ನರೇಶ್ ಮ೦ಚಿ )











****************

ಈ ಲೇಖನಕ್ಕೆ ಪೂರಕ ಮಾಹಿತಿ : ಶಶಿಕಾಂತ ಶೆಟ್ಟಿ, ಕಾರ್ಕಳ



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ